(ನ್ಯೂಸ್ ಕಡಬ) newskadaba.com, ಅ.15 ಬೆಂಗಳೂರು : ಈ ವರ್ಷದಿಂದ ಎಸ್ಎಸ್ಎಲ್ಸಿಯಲ್ಲಿ 33% ಅಂಕ ಪಡೆದರೆ ಪಾಸ್ ಎಂದು ಘೋಷಿಸಲಾಗುವುದು. ಈ ವರ್ಷದಿಂದಲೇ ಖಾಸಗಿ ಶಾಲೆಗಳಿಗೂ ಇದು ಅನ್ವಯ ಆಗಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಸಕ್ತ ವರ್ಷದಿಂದ 33% ಅಂಕ ಪಡೆದರೆ ಎಸ್ಎಸ್ಎಲ್ಸಿ ಪಾಸ್ ಎಂದು ಘೋಷಿಸಲಾಗುವುದು. ಅಲ್ಲಿಗೆ 625ಕ್ಕೆ 206 ಅಂಕ ಪಡೆದರೆ ವಿದ್ಯಾರ್ಥಿಗಳು ಉತ್ತೀರ್ಣ ಆಗಲಿದ್ದಾರೆ. ಆಂತರಿಕ ಅಂಕ, ಬಾಹ್ಯ ಅಂಕ ಎರಡು ಸೇರಿ 33% ಪಡೆಯಬೇಕಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.
ಇದೀಗ ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ತರಲು 33% ಪಾಸಿಂಗ್ ಅಂಕ ನಿಗದಿ ಮಾಡಲಾಗಿದೆ. 625ಕ್ಕೆ 206 ಅಂಕ ಪಡೆದರೆ ಅಥವಾ ಆಯಾ ವಿಷಯದ ಒಟ್ಟು ಅಂಕಗಳಲ್ಲಿ 30 ಅಂಕ ಪಡೆದಿರಬೇಕು. ಆಂತರಿಕ ಮತ್ತು ಬಾಹ್ಯ ಅಂಕ ಸೇರಿ ಒಟ್ಟು 33% ಅಂಕ ಪಡೆದ ವಿದ್ಯಾರ್ಥಿಯನ್ನ ಉತ್ತೀರ್ಣ ಎಂದು ಘೋಷಿಸಲಾಗುತ್ತದೆ ತಿಳಿಸಿದರು.













