(ನ್ಯೂಸ್ ಕಡಬ) newskadaba.com ಅ. 14. ಉಡುಪಿ ಆರ್ ಟಿಒ ಅಧಿಕಾರಿ ಲಕ್ಷ್ಮೀನಾರಾಯಣ ಪಿ. ನಾಯಕ್ ಅವರ ಮನೆಗೆ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರದಂದು ಬೆಳಗ್ಗೆ ದಾಳಿ ನಡೆಸಿದ್ದಾರೆ.
ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾದವರಾಗಿರುವ ಲಕ್ಷ್ಮೀನಾರಾಯಣ ಪಿ. ನಾಯಕ್ ಅವರು, ಪ್ರಸ್ತುತ ಉಡುಪಿಯಲ್ಲಿ ಆರ್ ಟಿಒ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಸಾರ್ವಜನಿಕರಿಂದ ಕೇಳಿಬಂದ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಅವರ ಮನೆ ಮತ್ತು ಸಂಬಂಧಿಕರ ನಿವಾಸಗಳಲ್ಲಿ ಶೋಧ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಉಡುಪಿಯ ಕಿನ್ನಿಮುಲ್ಕಿ ಪ್ರದೇಶದಲ್ಲಿರುವ ಫ್ಲ್ಯಾಟ್ ನಲ್ಲಿ ಪ್ರಮುಖ ಶೋಧ ಕಾರ್ಯ ನಡೆದಿದ್ದಲ್ಲದೆ, ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮತ್ತು ಉಡುಪಿ ತಾಲೂಕಿನ ಪಡುಅಲೆವೂರು ಗ್ರಾಮದಲ್ಲಿರುವ ಅವರ ಸಂಬಂಧಿಕರ ಮನೆಗಳಲ್ಲೂ ಲೋಕಾಯುಕ್ತ ತಂಡ ಪರಿಶೀಲನೆ ನಡೆಸಿದೆ. ನಾಯಕ್ ಅವರ ಆದಾಯ ಮತ್ತು ಆಸ್ತಿ ನಡುವಿನ ಅಸಮತೋಲನದ ಕುರಿತು ಬಂದ ದೂರು ಹಿನ್ನೆಲೆಯಲ್ಲಿ ಈ ಶೋಧ ಕಾರ್ಯ ನಡೆದಿದ್ದು, ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ಅಗತ್ಯ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.








