(ನ್ಯೂಸ್ ಕಡಬ) newskadaba.com, ಅ.11: ನಾರ್ವೆಯ ನೊಬೆಲ್ ಸಮಿತಿಯು 2025ರ ನೊಬೆಲ್ ಶಾಂತಿ ಪ್ರಶಸ್ತಿಗೆ ವೆನೆಜುವೆಲಾದ ಧೈರ್ಯವಂತ ನಾಯಕಿ ಮರಿಯಾ ಕೊರಿನಾ ಮಚಾಡೊ ಅವರನ್ನು ಆಯ್ಕೆ ಮಾಡಿದೆ. ವೆನೆಜುವೆಲಾದ ಜನರ ಹಕ್ಕುಗಳಿಗಾಗಿ ಮತ್ತು ಸರ್ವಾಧಿಕಾರಶಾಹಿಯ ವಿರುದ್ಧ ಪ್ರಜಾಪ್ರಭುತ್ವದ ಸ್ಥಾಪನೆಗಾಗಿ ನಡೆಸಿದ ಅವರ ನಿರ್ಭೀತ ಹೋರಾಟ ಈ ಪ್ರಶಸ್ತಿಗೆ ಕಾರಣವಾಗಿದೆ ಎಂದು ಸಮಿತಿ ಸ್ಪಷ್ಟಪಡಿಸಿದೆ.
ಈ ವರ್ಷದ ಪ್ರಶಸ್ತಿಗೆ ಸಂಬಂಧಿಸಿದಂತೆ ಎಲ್ಲೆಡೆ ಚರ್ಚೆಯಾಗುತ್ತಿದ್ದ ಹೆಸರುಗಳಲ್ಲಿ ಒಂದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಇದ್ದರು. ತಮ್ಮ 20 ಅಂಶಗಳ ಗಾಜಾ ಶಾಂತಿ ಯೋಜನೆ, 8 ಯುದ್ಧಗಳ ಅಂತ್ಯ, ಜಾಗತಿಕ ಶಾಂತಿಗೆ ತಮ್ಮ ಕೊಡುಗೆ ಇತ್ಯಾದಿಗಳ ಬಗ್ಗೆ ಸಾಕಷ್ಟು ಪ್ರಚಾರ ಮಾಡಿದ್ದ ಟ್ರಂಪ್ ಅವರಿಗೆ ಈ ಬಾರಿ ಪ್ರಶಸ್ತಿ ಕೈ ತಪ್ಪಿರುವುದು ವ್ಯಾಪಕ ಗಮನ ಸೆಳೆದಿದೆ. ಈ ಕುರಿತು ಪ್ರಶ್ನೆ ಕೇಳಿದಾಗ ನೊಬೆಲ್ ಶಾಂತಿ ಸಮಿತಿಯ ಅಧ್ಯಕ್ಷರು ಸ್ಪಷ್ಟವಾಗಿ ಮಾತನಾಡಿದ್ದಾರೆ.
ಅವರು ಹೇಳಿದ ಪ್ರಕಾರವಾಗಿ : “ಈ ಪ್ರಶಸ್ತಿ ಯಾರಿಗೂ ಪ್ರಚಾರದ ಆಧಾರದ ಮೇಲೆ ನೀಡಲಾಗುವುದಿಲ್ಲ. ಆಲ್ಫ್ರೆಡ್ ನೊಬೆಲ್ ಅವರ ಇಚ್ಛೆಯಂತೆ, ಧೈರ್ಯ, ಶಿಸ್ತು, ಮತ್ತು ಶಾಂತಿಯು ಒಡನಾಡಿಯಾದವರೇ ಈ ಪ್ರಶಸ್ತಿಗೆ ಅರ್ಹರಾಗುತ್ತಾರೆ. ಪ್ರಶಸ್ತಿಗೆ ಅರ್ಜಿಗಳ ಸಂಖ್ಯೆ, ಮಾಧ್ಯಮ ಒತ್ತಡ ಅಥವಾ ರಾಜಕೀಯ ಭರವಸೆಗಳು ಯಾವುದೇ ಪರಿಣಾಮ ಬೀರುವುದಿಲ್ಲ.”
ಅವರ ಪ್ರಕಾರ, ಮಚಾಡೊ ಅವರಿಗೆ ಸಾವಿನ ಬೆದರಿಕೆಯ ನಡುವೆಯೂ ಸ್ವದೇಶದಲ್ಲಿ ಉಳಿದು ಶಾಂತಿಪೂರ್ಣ ಹೋರಾಟ ನಡೆಸಿದ ಧೈರ್ಯದ ಕಾರಣ ಪ್ರಶಸ್ತಿ ನೀಡಲಾಗಿದೆ. ಅವರ ಹೋರಾಟ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದೆ.














