(ನ್ಯೂಸ್ ಕಡಬ) newskadaba.com, ಅ.11: ಏರ್ಬಸ್-320 ಮಾದರಿಯ ದೊಡ್ಡ ವಿಮಾನಗಳ ಕಾರ್ಯಾಚರಣೆ ಮತ್ತು ರಾತ್ರಿ ವೇಳೆ ಲ್ಯಾಂಡಿಂಗ್ ಸೌಲಭ್ಯ ಅಭಿವೃದ್ಧಿ ಸೇರಿದಂತೆ ಇತರ ಅನುಕೂಲಗಳಿಗಾಗಿ ವಿಜಯಪುರ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣ ಕಾಮಗಾರಿಗಳಿಗೆ ಹೆಚ್ಚುವರಿಯಾಗಿ 270.83 ಕೋಟಿ ರೂ. ಒದಗಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಮತ್ತು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ.
ಈ ಬಗ್ಗೆ ವಿವರ ಮಾಹಿತಿ ನೀಡಿರುವ ಅವರು, ʻಸಂಪುಟ ಸಭೆಯಲ್ಲಿ ಈ ಬಗ್ಗೆ ವಿಸ್ತೃತವಾಗಿ ಚರ್ಚಿಸಿ, ಒಪ್ಪಿಗೆ ನೀಡಲಾಗಿದೆ. ಇದರಿಂದಾಗಿ ವಿಜಯಪುರ ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿ ಒಟ್ಟು ವೆಚ್ಚವು 618.75 ಕೋಟಿ ರೂ.ಗಳಾಗಲಿದೆ. ಎಟಿಆರ್ ಮಾದರಿಯ ನಾಗರಿಕ ವಿಮಾನ ಕಾರ್ಯಾಚರಣೆಗೆ ಸೀಮಿತವಾಗಿದ್ದ ವಿಮಾನ ನಿಲ್ದಾಣದ ಮೂಲ ವಿನ್ಯಾಸವನ್ನು ಏರ್ಬಸ್-320 ಮಾದರಿಯ ವಿಮಾನಗಳ ಕಾರ್ಯಾಚರಣೆಗೂ ಅನುಕೂಲವಾಗುವಂತೆ ಬದಲಿಸಿದ್ದರಿಂದ ವೆಚ್ಚ ಹೆಚ್ಚಾಗುತ್ತಿದೆʼ ಎಂದು ತಿಳಿಸಿದ್ದಾರೆ.













