(ನ್ಯೂಸ್ ಕಡಬ) newskadaba.com, ಅ.10 ಬೆಂಗಳೂರು: ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಒಟ್ಟು 10 ಕೆಜಿ ಅಕ್ಕಿ ನೀಡುತ್ತಿದ್ದು, ಇನ್ನುಮುಂದೆ ಹೆಚ್ಚುವರಿಯಾಗಿ ನೀಡುತ್ತಿರುವ ಐದು ಕೆಜಿ ಅಕ್ಕಿ ಬದಲು ಇಂದಿರಾ ಆಹಾರ ಕಿಟ್ ವಿತರಣೆ ಮಾಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ್ ಅವರು, ಅನ್ನಭಾಗ್ಯ ಅಕ್ಕಿಯ ಅಕ್ರಮ ಸಾಗಾಟ, ಕಳ್ಳತನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದಿರಾ ಆಹಾರ ಕಿಟ್ ನೀಡಲು ತೀರ್ಮಾನಿಸಲಾಗಿದೆ ಎಂದರು.
ಅನ್ನಭಾಗ್ಯ ಯೋಜನೆಯಡಿ ರಾಜ್ಯದ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡುದಾರರಿಗೆ ಹೆಚ್ಚುವರಿಯಾಗಿ ನೀಡುತ್ತಿರುವ ಐದು ಕೆ.ಜಿ ಅಕ್ಕಿಯ ಬದಲಾಗಿ 61.19 ಕೋಟಿ ರೂ. ವೆಚ್ಚದಲ್ಲಿ ಇಂದಿರಾ ಆಹಾರ ಕಿಟ್ ನೀಡಲು ಸಚಿವ ಸಂಪುಟ ನಿರ್ಧಾರ ಕೈಗೊಂಡಿದೆ ಎಂದರು.













