(ನ್ಯೂಸ್ ಕಡಬ) newskadaba.com, ಸೆ.06 ಬೆಂಗಳೂರು:ಮೊಬೈಲ್ ಗೀಳು ಈಗ ಮಕ್ಕಳಲ್ಲಿ ಹೆಚ್ಚಾಗಿದೆ. ಈ ಗೀಳಿನಿಂದ ಮಕ್ಕಳನ್ನು ಹೊರಗೆ ತರುವ ಕೆಲಸವನ್ನು ಶಿಕ್ಷಕರು ಪರಿಣಾಮಕಾರಿಯಾಗಿ ಆಗಬೇಕಿದೆ. ಆದ್ದರಿಂದ, “ಮೊಬೈಲ್ ಬಿಡಿ-ಪುಸ್ತಕ ಹಿಡಿ” ಎನ್ನುವ ಮೌಲ್ಯವನ್ನು ಪ್ರತೀ ಶಾಲೆ ಮತ್ತು ಮನೆಗಳಲ್ಲೂ ಜಾರಿ ಆಗಲಿ ಎಂದು ಶಿಕ್ಷಕರಿಗೆ-ಮಕ್ಕಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಅಭಿನಂದಿಸಿ ಮಾತನಾಡಿದರು .ಶಿಕ್ಷಣ ನಮ್ಮ ಸರ್ಕಾರದ ಆದ್ಯತಾ ಕಾರ್ಯಕ್ರಮವಾಗಿದ್ದು ವರ್ಷಕ್ಕೆ 65 ಸಾವಿರ ಕೋಟಿ ರೂಪಾಯಿಯನ್ನು ಶಿಕ್ಷಣಕ್ಕೆ ಖರ್ಚು ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೆಕ್ಕ ಬಿಚ್ಚಿಟ್ಟರು. ನಾನು ರಾಜಪ್ಪ ಮೇಸ್ಟ್ರಿಂದ ಶಾಲಾ ಶಿಕ್ಷಣವನ್ನು ಹಾಗೂ ಪ್ರೊ.ನಂಜುಂಡಸ್ವಾಮಿ ಅವರಿಂದ ರಾಜಕೀಯ ಪಾಠ ಕಲಿತೆ ಎನ್ನುವ ಮೂಲಕ ತಮ್ಮ ಶಿಕ್ಷಕರನ್ನು ಸ್ಮರಿಸಿದ ಸಿ.ಎಂ.ಸಿದ್ದರಾಮಯ್ಯ ಅವರು ಇಬ್ಬರಿಗೂ ಧನ್ಯತೆ ಹೇಳಿದರು.
ನಮ್ಮ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಮನಸ್ಥಿತಿಯನ್ನು ರೂಪಿಸುವುದು ವೈಚಾರಿಕ ಶಿಕ್ಷಣ. ಕೇವಲ ಪಾತ್ರೆ ತುಂಬಿಸುವುದು ಶಿಕ್ಷಣ ಅಲ್ಲ. ಮಕ್ಕಳಲ್ಲಿ ಅರಿವಿನ ಕಿಡಿ ಹೊತ್ತಿಸುವುದೇ ಶಿಕ್ಷಣದ ಉದ್ದೇಶ ಮತ್ತು ಮಹತ್ವವಾಗಿದೆ. ಇಂಥಾ ಶಿಕ್ಷಣ ನಮ್ಮ ಸರ್ಕಾರದ ಗುರಿ ಎಂದರು.













