MBBS ಓದಲು ಬಯಸುವವರಿಗೆ ಸಿಹಿ ಸುದ್ದಿ: ಕರ್ನಾಟಕಕ್ಕೆ 400 ಹೆಚ್ಚುವರಿ ವೈದ್ಯಕೀಯ ಸೀಟುಗಳಿಗೆ NMC ಅನುಮೋದನೆ!



(ನ್ಯೂಸ್ಕಡಬ) newskadaba.com, ಸೆ. 03 ಬೆಂಗಳೂರು: ಎಂಬಿಬಿಎಸ್ ವ್ಯಾಸಂಗ ಮಾಡಲು ಬಯಸುವವರಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಒಳ್ಳೆಯ ಸುದ್ದಿ ನೀಡಿದೆ. ಕರ್ನಾಟಕಕ್ಕೆ ಹೆಚ್ಚುವರಿ 400 ವೈದ್ಯಕೀಯ ಸೀಟುಗಳು ಲಭ್ಯವಾಗಿದ್ದು, ಎರಡನೇ ಸುತ್ತಿನ ಸೀಟು ಹಂಚಿಕೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪರಿಗಣಿಸಿದೆ.







ನೀಟ್‌ ಫಲಿತಾಂಶದ ನಂತರ ಪ್ರಕಟಿಸಿದ್ದ ಮೊದಲ ಸುತ್ತಿನ ಸೀಟು ಹಂಚಿಕೆಯಲ್ಲಿ 9,263 ಸೀಟುಗಳು ಲಭ್ಯವಿದ್ದವು. ರಾಜ್ಯದ ಎಂಟು ವೈದ್ಯಕೀಯ ಕಾಲೇಜುಗಳಲ್ಲಿ ತಲಾ 50 ಸೀಟುಗಳ ಹೆಚ್ಚಳಕ್ಕೆ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಅನುಮತಿ ನೀಡಿದ್ದು, ರಾಜ್ಯದಲ್ಲಿ ಲಭ್ಯವಿರುವ ವೈದ್ಯಕೀಯ ಸೀಟುಗಳ ಸಂಖ್ಯೆ 9,663ಕ್ಕೆ ಏರಿಕೆಯಾಗಿದೆ.






ರಾಜ್ಯ ಸರ್ಕಾರ 15 ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ತಲಾ 100 ಹೆಚ್ಚುವರಿ ಸೀಟುಗಳಿಗಾಗಿ ಮನವಿ ಮಾಡಿತ್ತು. ಆದರೆ ಮೂಲಸೌಕರ್ಯ ಸಮಸ್ಯೆಗಳನ್ನು ಉಲ್ಲೇಖಿಸಿ ಎನ್‌ಎಂಸಿ ವಿನಂತಿಯನ್ನು ತಿರಸ್ಕರಿಸಿತ್ತು. ಎನ್‌ಎಂಸಿ ಬೆಳಗಾವಿ, ಚಿಕ್ಕಬಳ್ಳಾಪುರ, ಕಲಬುರಗಿ, ಹಾಸನ, ಮೈಸೂರು, ರಾಯಚೂರು, ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರಗಳ ಸೀಟು ಹೆಚ್ಚಳ ಮಾಡಲು ಸಮ್ಮತಿಸಿದೆ.

ಬೀದರ, ಚಾಮರಾಜನಗರ, ಗದಗ, ಕಾರವಾರ, ಕೊಪ್ಪಳ, ಮಂಡ್ಯ, ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಸೀಟು ಹೆಚ್ಚಳದ ಮನವಿಯನ್ನು ತಿರಸ್ಕರಿಸಿದೆ.

error: Content is protected !!
Scroll to Top