(ನ್ಯೂಸ್ ಕಡಬ) newskadaba.com, ಆ.29: ದೈಹಿಕ ಹಾಗೂ ಮಾನಸಿಕ ಆರೋಗ್ಯದ ದೃಷ್ಟಿಯಿಂದ ನಿದ್ರೆ ತುಂಬಾನೇ ಮುಖ್ಯ. ಆದರೆ, ಅದೆಷ್ಟೋ ಮಂದಿ ನಿದ್ರೆ ಮಾಡಲು ಪ್ರಯತ್ನಿಸಿದರೂ ನಿದ್ದೆಯೇ ಬರಲ್ಲ. ಮಲಗಿದ ಕೂಡಲೇ ನಿದ್ರೆ ಬರುವುದಿಲ್ಲ ಎಂದೆಲ್ಲಾ ಹೇಳುತ್ತಿರುತ್ತಾರೆ. ಹಾಗಾದರೆ ಮಲಗಿದ ಕೂಡಲೇ ನಿದ್ರೆ ಬರಬೇಕು ಎಂದರೆ ಈ ಟಿಪ್ಸ್ನ್ನು ಪಾಲಿಸಿ.
ಮಲಗುವಾಗ ಕಾಲಿಗೆ ಸಾಕ್ಸ್ ಧರಿಸುವುದರಿಂದ ಉತ್ತಮ ನಿದ್ರೆ ಪಡೆಯಬಹುದು. ಇದು ಪಾದಕ್ಕೆ ಬೆಚ್ಚಗಿನ ಅನುಭವ ನೀಡುತ್ತದೆ. ಅಲ್ಲದೇ, ಮೆದುಳಿಗೆ ನಿದ್ರೆಯ ಸಂದೇಶವನ್ನು ನೀಡುವ ಕಾರ್ಯ ನೀಡುತ್ತದೆ. ಹಾಗಾಗಿ ಮಲಗುವಾಗ ಸಾಕ್ಸ್ ಧರಿಸುವುದು ಒಳ್ಳೆಯದು ಎಂದು ತಜ್ಞರು ಸಲಹೆ ನೀಡುತ್ತಾರೆ.
ಕೆಲವು ಮಂದಿ ಮಲಗುವಾಗ ಲೈಟ್ ಆಫ್ ಮಾಡುವುದಿಲ್ಲ. ಈ ಅಭ್ಯಾಸವು ನಿದ್ರೆಗೆ ತೊಂದರೆಯನ್ನುಂಟು ಮಾಡುತ್ತದೆ. ಹಾಗಾಗಿ ಲೈಟ್ ಆಫ್ ಮಾಡಿ ಮತ್ತು ಯಾವುದೇ ಬೆಳಕು ಕೋಣೆಯೊಳಗೆ ಬೀಳದಂತೆ ನೋಡಿಕೊಳ್ಳಿ. ಈ ಸಲಹೆಯನ್ನು ಪಾಲಿಸಿದರೆ ನೀವು ಮಲಗಿದ ತಕ್ಷಣ ನಿದ್ರೆಗೆ ಜಾರುತ್ತೀರಿ.
ಸರಿಯಾಗಿ ನಿದ್ರೆ ಬರಬೇಕು ಎಂದರೆ ಮಲಗುವ ಹಾಸಿಗೆ ಕೂಡ ಚೆನ್ನಾಗಿರಬೇಕು. ದೇಹಕ್ಕೆ ಒತ್ತಡ ಬೀಳದಂತಹ ಮೃದುವಾಗಿರುವಂತಹ ಹಾಸಿಗೆ ಹಾಗೂ ದಿಂಬನ್ನು ಬಳಸಿ. ಹೀಗೆ ಮಾಡಿದರೆ ಖಂಡಿತವಾಗಿಯೂ ಉತ್ತಮ ನಿದ್ರೆ ಬರುತ್ತದೆ.
ಮಲಗುವ ಕೋಣೆಯ ವಾತಾವರಣ ನಿಶ್ಶಬ್ದವಾಗಿರುವಂತೆ ನೋಡಿಕೊಳ್ಳಿ. ಕೆಲವು ಮಂದಿಗೆ ಶಬ್ದಗಳು ಕೇಳಿಸಿದರೆ ಕೂಡಲೇ ನಿದ್ದೆ ಬರುವುದಿಲ್ಲ. ಹಾಗಾಗಿ ನಿಮ್ಮ ಮಲಗುವ ಕೋಣೆ ನಿಶ್ಶಬ್ದವಾಗಿರಲಿ. ಇದರಿಂದ ಮಲಗಿದ ಕೂಡಲೇ ನಿದ್ರೆ ಬರುತ್ತದೆ.
ಮಲಗುವ ಮೊದಲು ಮೊಬೈಲ್ ನೋಡುವ ಬದಲು ಪುಸ್ತಕ ಓದುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಹಾಗೂ ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸಬಹುದು.
ಮಲಗಿದ ಕೂಡಲೇ ನಿದ್ರೆಗೆ ಜಾರಬೇಕೆಂದರೆ ನೀವು ಮೊಬೈಲ್, ಲ್ಯಾಪ್ಟಾಪ್ ಹಾಗೂ ಇತರ ಗ್ಯಾಜೆಟ್ಗಳನ್ನು ༀ ಹಾಸಿಗೆಯಿಂದ ದೂರವಿರಿಸಿ. ಏಕೆಂದರೆ, ಇವುಗಳು ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯುತ್ತದೆ. ಈ ಕಾರಣದಿಂದ ನೀವು ಸರಿಯಾಗಿ ನಿದ್ರೆ ಮಾಡಲು ಸಾಧ್ಯವಿಲ್ಲ.












