(ನ್ಯೂಸ್ ಕಡಬ) newskadaba.com ಆ. 29. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾದ ಮಂಗಳೂರಿನ ಮರವೂರು ಬಳಿ ಇರುವ ಏರ್ ಪೋರ್ಟ್ ರಸ್ತೆಯಲ್ಲಿ ದೊಡ್ಡ-ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸವಾರರಿಗೆ ಮತ್ತು ಪ್ರಯಾಣಿಕರಿಗೆ ಗಂಭೀರ ಅಪಾಯ ತಂದೊಡ್ಡಿದೆ.
ಇದೇ ರಸ್ತೆಯಲ್ಲಿ ಸಾರ್ವಜನಿಕ ಸಾರಿಗೆ ಮತ್ತು ತುರ್ತು ಸೇವೆಗಳ ವಾಹನಗಳು ಸೇರಿದಂತೆ ದಿನನಿತ್ಯ ಭಾರೀ ಪ್ರಮಾಣದಲ್ಲಿ ವಾಹನಗಳು ಸಂಚರಿಸುತ್ತಿದ್ದು, ಹಾನಿಗೊಳಗಾದ ಈ ರಸ್ತೆಯಿಂದಾಗಿ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಅಲ್ಲದೇ ಮಳೆಗಾಲದಲ್ಲಿ ಅಥವಾ ರಾತ್ರಿಯ ಹೊತ್ತಿನಲ್ಲಿ ಅಪಘಾತವುಂಟಾಗುವ ಸಂಭವ ಕೂಡಾ ಹೆಚ್ಚಾಗಿದೆ. ಹೀಗಾಗಿ ರಸ್ತೆಯು ಮತ್ತಷ್ಟು ಹದಗೆಡದಂತೆ ತುರ್ತು ದುರಸ್ತಿ ಕಾರ್ಯದ ಅಗತ್ಯವಿದೆ ಎಂಬುವುದಾಗಿ ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಸದ್ಯ ಮಂಗಳೂರಿನಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ರಸ್ತೆಯಲ್ಲಿನ ಗುಂಡಿಗಳು ಮತ್ತಷ್ಟು ಆಳವಾಗಿ, ವಾಹನ ಸವಾರರಿಗೆ ಹೆಚ್ಚಿನ ಅಪಾಯವನ್ನುಂಟು ಮಾಡುತ್ತಿವೆ. ಇದರ ಜೊತೆಗೆ ಸರಿಯಾದ ಬೀದಿ ದೀಪಗಳ ಕೊರತೆಯು ಮತ್ತಷ್ಟು ಅಪಾಯವನ್ನು ಹೆಚ್ಚಿಸುತ್ತದೆ. ರಾತ್ರಿಯ ಹೊತ್ತಿನಲ್ಲಿ ರಸ್ತೆಯಲ್ಲಿನ ಗುಂಡಿಗಳು ಸರಿಯಾಗಿ ಕಾಣಿಸದೇ ಮತ್ತಷ್ಟು ಗಂಭೀರ ಅಪಘಾತಗಳಿಗೆ ಕಾರಣವಾಗಬಹುದು.









