(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜು. 01. ಕುಕ್ಕೆ ಸುಬ್ರಹ್ಮಣ್ಯದಂತಹ ಶ್ರೀಮಂತ ದೇವಸ್ಥಾನಗಳ ಅನುದಾನದಲ್ಲಿ ಸಿ ಗ್ರೇಡ್ ದೇವಸ್ಥಾನಗಳ ಅಭಿವೃದ್ಧಿ ನಡೆಸಲು ಆದ್ಯತೆ ನೀಡಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಹೇಳಿದ್ದಾರೆ.
ಈ ಬಗ್ಗೆ ಸುಬ್ರಹ್ಮಣ್ಯದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಎ & ಬಿ ಗ್ರೇಡ್ ದೇವಸ್ಥಾನಗಳ ಅಭಿವೃದ್ಧಿಗೆ ಆಯಾ ದೇವಸ್ಥಾನಗಳಲ್ಲಿ ಅನುದಾನ ಲಭ್ಯವಿರುತ್ತದೆ. ಆದರೆ ಸಿ ಗ್ರೇಡ್ ದೇವಸ್ಥಾನಗಳಲ್ಲಿ ಅನುದಾನ ಇಲ್ಲದೇ ಇರುವುದರಿಂದ ಸಿ ಗ್ರೇಡ್ ದೇವಸ್ಥಾನಗಳ ಅಭಿವೃದ್ಧಿಯನ್ನು ಶ್ರೀಮಂತ ದೇವಸ್ಥಾನಗಳ ವತಿಯಿಂದ ನಡೆಸಲು ಆದ್ಯತೆ ನೀಡಲಾಗುವುದು ಎಂದರು.
ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಎಲ್ಲಾ ರೀತಿಯ ಅಭಿವೃದ್ಧಿ ಕೆಲಸ ಮಾಡಲಾಗುವುದು. ಈಗಾಗಲೇ ಕುಕ್ಕೆ ಸುಬ್ರಹ್ಮಣ್ಯಕ್ಕೆ ಪ್ರಾಧಿಕಾರ ಆಗಬೇಕೆಂಬ ಬೇಡಿಕೆಯಿದ್ದು, ಈಗ ಸಮಿತಿ ಇರುವುದರಿಂದ ಮುಂದಿನ ಮೂರು ವರ್ಷದವರೆಗೆ ಪ್ರಾಧಿಕಾರ ಮಾಡುವುದಿಲ್ಲ, ಆ ಬಳಿಕ ಯೋಚನೆ ಮಾಡೋಣ ಎಂದರು.
ಈ ಸಂದರ್ಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ಮುಜರಾಯಿ ಇಲಾಖೆ ಆಯುಕ್ತ ವೆಂಕಟೇಶ್, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ರವಿಶಂಕರ ಶೆಟ್ಟಿ ಮಲ್ಲಿಕಾ ಪಕ್ಕಳ, ಗ್ರಾ.ಪಂ. ಅಧ್ಯಕ್ಷೆ ಸುಜಾತ ಕಲ್ಲಾಜೆ, ವಿವಿಧ ಇಲಾಖೆ ಅಧಿಕಾರಿಗಳು, ವ್ಯವಸ್ಥಾಪನಾ ಸಮಿತಿ ಸದಸ್ಯರು, ಮಾಸ್ಟರ್ ಪ್ಲಾನ್ ಸದಸ್ಯರು ಜೊತೆಗಿದ್ದರು.













